ಅಣ್ಣೆಸೊಪ್ಪು
	
ಅಮರ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಬಗೆಯ ಮೂಲಿಕೆ. ಸಿಲೊಷಿಯ ಅರ್ಜೆಂಷಿಯ ಇದರ ಸಸ್ಯ ವೈಜ್ಞಾನಿಕ ಹೆಸರು. ಹೊಲಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ. ಎಳೆಯ ಗಿಡ ಒಳ್ಳೆಯ ಸೊಪ್ಪು ತರಕಾರಿ ಎಂದು ಜನಪ್ರಿಯವಾಗಿದೆ. ಇದರಲ್ಲಿ ಪ್ರೋಟೀನುಗಳು ಕಾರ್ಬೊಹೈಡ್ರೇಟುಗಳೂ ಹೇರಳವಾಗಿವೆ. ಇದರ ಸಾರು, ಹುಳಿ ರುಚಿಗಟ್ಟಾಗಿರುತ್ತದೆ. ಬಲಿತ ಗಿಡ ದನಕ್ಕೆ ಮೆಚ್ಚಿನ ಮೇವು. ಈ ಗಿಡ ಮುಂಗಾರು ಮಳೆ ಬಿದ್ದಮೇಲೆ ಹೊಲ ತೋಟಗಳಲ್ಲಿ ಕಳೆಯಾಗಿ ಬೆಳೆದು ಚಳಿಗಾಲ ಮುಗಿಯುವವರೆಗೂ ಇದ್ದು, ಬೀಜ ಬಿಟ್ಟು ತನ್ನ ಜೀವನಚಕ್ರವನ್ನು ಮುಗಿಸುತ್ತದೆ. 
	
ಸಿಲೋಷಿಯ ಜಾತಿಯಲ್ಲಿ ಒಟ್ಟು 60 ಪ್ರಭೇದಗಳಿದ್ದು ಕೆಲವನ್ನು ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು. ಇವುಗಳ ಎಲೆ ತೊಟ್ಟಿನಿಂದ ಕೂಡಿದ್ದು ಪರ್ಯಾಯ ಜೋಡಣೆಯನ್ನು ಪ್ರದರ್ಶಿಸುತ್ತದೆ; ಎಲೆಯ ಅಲುಗು ಕದರಿನಾಕಾರವಾಗಿದ್ದು ತುದಿ ಮೊನಚಾಗಿರುತ್ತದೆ. ಹೂಗೊಂಚಲು ಸ್ಪೈಕ್ ಮಾದರಿಯದು ಗಿಡದ ತುದಿಯಲ್ಲಿ ಅರಳುತ್ತದೆ. ಹೂ ದ್ವಿಲಿಂಗಿ. ಅದಕ್ಕೆ ಪುಷ್ಪಪತ್ರಗಳೂ ಕೂಡಿಕೊಂಡಿರುವ ಐದು ದಳಗಳೂ ಇದ್ದು ವಿವಿಧ ವರ್ಣಗಳಿಂದ ಕೂಡಿರುತ್ತದೆ. ಬುಡದಲ್ಲಿ ಕೂಡಿ ಕೊಂಡಿರುವ ಐದು ಕೇಸರಗಳ ತುದಿಗಳು ಬಿಡಿಯಾಗಿರುತ್ತವೆ. ಉನ್ನತ ಸ್ಥಿತಿಯ ಅಂಡಾಶಯವೂ ಅದರೊಳಗೆ ಎರಡು ಅಥವಾ ಹೆಚ್ಚು ಹೆಚ್ಚು ಅಂಡಗಳೂ ಇರುತ್ತವೆ. ವಂಶಾಭಿವೃದ್ಧಿ ಬೀಜಗಳಿಂದ. 							     (ಡಿ.ಎಂ.; ಎನ್.ಆರ್.ವಿ.)
	
ಅಣ್ಣೆಸೊಪ್ಪಿಗೆ ಔಷಧಿಯ ಗುಣಗಳೂ ಉಂಟು. ಇದರ ಎಲೆಯ ರಸ, ಕಷಾಯ ಅಥವಾ ಚೂರ್ಣವನ್ನು ಸೇವಿಸಿದರೆ ಪಿತ್ತಕೋಶ ಬಲಗೊಳ್ಳುತ್ತದೆ. ಬೀಜದ ಚೂರ್ಣವನ್ನು ಅರೆದು ಸೇವಿಸುವುದರಿಂದ ಭೇದಿ ನಿಲ್ಲುವುದಲ್ಲದೆ ವೀರ್ಯವೃದ್ಧಿಗೂ ಅನುಕೂಲ. ಬೀಜವನ್ನು ಅರೆದು ಗಂಧ ಮಾಡಿಕೊಂಡು ಕಣ್ಣಿಗೆ ಲೇಪಿಸಿದರೆ ಕಣ್ಣಿನ ರೋಗಗಳು ವಾಸಿಯಾಗುವುವು. 

(ಪರಿಷ್ಕರಣೆ: ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ